Wednesday 6 March 2013

B M Shri's English Geeta

                ಕಾರಿ ಹೆಗ್ಗಡೆಯ ಮಗಳು


ಪಡುವ ದಿಬ್ಬದ ಗೌಡನೊಬ್ಬನು
ಬಿಡದೆ ತೊರೆಯನ ಕೂಗಿಕೊಂಡನು;
ತಡೆಯದೀಯದೆ ಗಡುವ ಹಾಯಿಸು
ಕೊಡುವೆ ಕೇಳಿದ ಹೊನ್ನನು

ಆರು ನೀವೀ ಕರಗಿ ಮೊರೆಯುವ
ನೀರು ಕಾಯಲ ಹಾಯುವವರು?
ಪಡುವದಿಬ್ಬದ ಗೌಡ ನಾನೀ
ಮಡದಿ ಕಾರಿಯ ಕುವರಿಯು.

ಓಡಿ ಬಂದೆವು ಮೂರು ದಿವಸ;
ಜಾಡ ಹಿಡಿದು ಹಿಂದೆ ಬಂದರು;
ನಮ್ಮ ನೀ ಕಣಿವೆಯಲಿ ಕಂಡರೆ
ಚಿಮ್ಮಿ ಹರಿವುದು ನೆತ್ತರು.

ಹತ್ತಿ ಕುದುರೆಯ ತರುಬಿ ಬರುವರು.
ಮುತ್ತಿ ಕೊಂಡರೆ ನನ್ನ ಕೊಲುವರು;
ಘೋರದುಃಖದ ನಾರಿಯನು ಬಳಿ
ಕಾರು ನಗಿಸಲು ಬಲ್ಲರು?

ಆಗ ಅಂಜದೆ, ತೊರೆಯನೆಂದನು;
ಬೇಗ, ಜೀಯಾ, ಓಡ ತರುವೆನು.
ಸುಡಲಿ ಹೊನ್ನು, ಬೆಡಗಿ ನಿನ್ನೀ
ಮಡದಿಗೋಸುಗ ಬರುವೆನು.

ಆದುದಾಗಲಿ, ಮುದ್ದಿನರಗಿಣಿ
ಗಾದ ಗಂಡವ ಕಾದು ಕೊಡುವೆನು.
ಕಡಲು ನೊರೆಗಡೆದೆದ್ದು ಕುದಿಯಲಿ
ಗಡುವ ಹಾಯಿಸಿ ಬಿಡುವೆನು.

ತೂರು ಗಾಳಿಗೆ ಕಡಲು ಕುದಿಯಿತು,
ನೀರ ದೆವ್ವಗಳರಚಿಕೊಂಡುವು.
ಹೆಪ್ಪು ಮೋಡದ ಹುಬ್ಬುಗಂಟಿಗೆ
ಕಪ್ಪಗಾದವು ಮುಖಗಳು.

ಕೆರಳಿ ಕೆರಳಿ ಗಾಳಿ ಚಚ್ಚಿತು;
ಇರುಳ ಕತ್ತಲೆ ಕವಿದು ಮುಚ್ಚಿತು;
ಕಣಿವೆಯಿಳಿವರ ಕುದುರೆ ಕತ್ತಿಯ
ಖಣಿಖಣಿಧ್ವನಿ ಕೇಳಿತು!

ಏಳು, ಬೇಗೇಳಣ್ಣ, ಎಂದಳು;
ಹೂಳಿಕೊಳಲಿ ನನ್ನ ಕಡಲು,
ಮುಳಿದ ಮುಗಿಲ ತಡೆಯಬಲ್ಲೆ,
ಮುಳಿದ ತಂದೆಯ ತಡೆಯನು.

ಇತ್ತ ಕರೆಮೊರ ಹಿಂದಕಾಯಿತು;
ಅತ್ತ ತೆರೆಮೊರೆ ಸುತ್ತಿಕೊಂಡಿತು;
ಆಳ ಕೈಯಲಿ ತಾಳಬಹುದೇ
ಏಳು ಬೀಳಿನ ಕಡಲದು!

ಅಲೆಗಳಬ್ಬರದಲ್ಲಿ ಮೀಟಿ
ಮುಳುಗುತಿಹರು, ಏಳುತಿಹರು--
ಕರೆಗೆ ಬಂದ ಕಾರಿಹೆಗ್ಗಡೆ,
ಕರಗಿ ಮುಳಿಸು ಅತ್ತನು!

ತೊಂಡುತೆರೆಗಳ ಮುಸುಕಿನಲ್ಲಿ,
ಕಂಡು ಮಗಳ, ಕರಗಿಹೋದ--
ಒಂದು ಕೈ ನೀಡಿದಳು ನೆರವಿಗೆ,
ಒಂದು ತಬ್ಬಿತು ನಲ್ಲನ!

ಮರಳು, ಮರಳು, ಮಗಳೆ ಎಂದ,
ಮೊರೆವ ಕಾಯಲ ಗಂಟಲಿಂದ;
ಮರೆತೆ, ಒಪ್ಪಿದೆ ನಿನ್ನ ನಲ್ಲನ,
ಮರಳು ಕಂದಾ ಎಂದನು.

ಮರಳ ಬಹುದೇ? ಹೋಗಬಹುದೆ?
ಕರೆಯ ತರೆಯಪ್ಪಳಿಸಿ ಹೊಯ್ದು
ಹೊರಳಿಹೋದುವು ಮಗಳ ಮೇಲೆ,
ಕೊರಗಿನಲಿ ಅವನುಳಿದನು

ಬಿ. ಎಂ. ಶ್ರೀಕಂಠಯ್ಯ